ದೈಮಾಬಾದ್-
	ಮಹಾರಾಷ್ಟ್ರ ರಾಜ್ಯದ ಅಹಮದ್‍ನಗರ ಜಿಲ್ಲೆಯಲ್ಲಿ ಗೋದಾವರಿಯ ಉಪನದಿಯಾದ ಪ್ರವರಾ ನದಿಯ ದಂಡೆಯ ಮೇಲೆ ಮೇಲಿರುವ ಒಂದು ಹಳ್ಳಿ.  ಇದರ ಸಮೀಪದಲ್ಲಿ ಒಂದು ವಿಸ್ತರವಾದ ಶಿಲಾತಾಮ್ರಯುಗ ಸಂಸ್ಕøತಿಯ ಮಾನವರ ವಾಸ್ತವ್ಯದ ನೆಲೆಯೊಂದು ಬೆಳಕಿಗೆ ಬಂದಿದೆ.  ಇಲ್ಲಿ ಸಂಸ್ಕøತಿಯ ಮೂರು ಹಂತಗಳು ಕಂಡುಬಂದಿವೆ.  ಅತ್ಯಂತ ಪ್ರಾಚೀನ ಹಂತದ ಸಂಸ್ಕøತಿ ಸ್ಥೂಲವಾಗಿ ಕರ್ನಾಟಕದ ಬ್ರಹ್ಮಗಿರಿಯ (ಚಿತ್ರದುರ್ಗ ಜಿಲ್ಲೆ) ನೂತನ ಶಿಲಾಯುಗ ಸಂಸ್ಕøತಿಗೆ ಹೋಲುತ್ತದೆ.  ಈ ಸಂಸ್ಕøತಿಯ ಅವಶೇಷಗಳಲ್ಲಿ ಇದಕ್ಕೆ ಸೇರಿದ್ದೆನ್ನಬಹುದಾದ ಒಂದು ಮೃಣ್‍ಪಾತ್ರೆಯ ಮೇಲಿನ ವರ್ಣಚಿತ್ರ ಬಹು ಅಪೂರ್ವವಾದ್ದು.  ಎರಡನೆಯ ಹಂತದ ಸಂಸ್ಕøತಿ ಬಹಳ ಮಟ್ಟಗೆ ಮಾಳವ ಪ್ರದೇಶದ ಶಿಲಾತಾಮ್ರಯುಗ ಸಂಸ್ಕøತಿಯನ್ನು ಹೋಲುತ್ತದೆ.  ಮೂರನೆಯ ಹಂತದಲ್ಲಿ ಗೋದಾವರಿ ಬಯಲಿನ ಶಿಲಾತಾಮ್ರ ಸಂಸ್ಕøತಿಯ ಅವಶೇಷಗಳು ದೊರಕಿವೆ.  ಇವುಗಳಲ್ಲಿ ಗಮನಾರ್ಹವಾದ್ದೆಂದರೆ ಚಿನ್ನದ ತಂತಿಯ ಒಂದು ಸುತ್ತೋಲೆ.  ಈ ಮೂರು ಹಂತಗಳ ಸಂಸ್ಕøತಿ ಅವಶೇಷಗಳಲ್ಲಿ ವಿವಿಧ ಮೃಣ್‍ಪಾತ್ರೆಗಳು, ಸಣ್ಣ ಸಣ್ಣ ಕಲ್ಲಿನ ಆಯುಧಗಳು, ಗಟ್ಟಿಗಳು, ತಾಮ್ರದ ಚಪ್ಪಟೆಕೊಡಲಿ, ಚಾಕು, ತಂತಿ, ನಾಯಿಯ, ಗೂಳಿಯ ಮತ್ತು ಮನುಷ್ಯನ ಸುಟ್ಟ ಮಣ್ಣಿನ ಗೊಂಬೆಗಳು, ಉತ್ತಮ ಜಾತಿಯ ಕಲ್ಲಿನ ಹಾಗೂ ದಂತದ ಮಣಿಗಳು.  ಅಲ್ಲಲ್ಲಿ ಆಯಾತಾಕಾರದ ಅಥವಾ ವರ್ತುಳಾಕಾರದ ಗುಡಿಸಿಲಿನಂಥ ಮನೆಗಳ ವಿನ್ಯಾಸಗಳು, ಶವಗಳನ್ನು ಉದ್ದಕ್ಕೆ ಮಲಗಿಸಿ ಹುಗಿದ ಗುಂಡಿಗಳು, ಸತ್ತ ಮಕ್ಕಳ ಅಸ್ಥಿಯ ಅವಶೇಷ ಉಳ್ಳ ಒಂದು ಅಥವಾ ಬಾಯಿಗೆ ಬಾಯಿ ಸೇರಿಸಿ ಇಟ್ಟ ಎರಡು ಅಥವಾ ಮೂರು ಅಸ್ಥಿಮೃಣ್‍ಪಾತ್ರೆಗಳು ಇವೆ.

	ನೆಲೆಯಲ್ಲಿ ಒಟ್ಟಿಗೆ ಸುಮಾರು  60 ಕಿಲೋ ಭಾರದ ಘಟ್ಟಿ ತಾಮ್ರಗಳು ದೊರೆತವು.  ಎರಡು ಕೋಣಗಳು ಎಳೆಯುವ ಬಂಡಿಯನ್ನು ನಡೆಸುತ್ತಿರುವ ಮನುಷ್ಯ, ಆನೆ, - ಮುಂತಾದ ಆಕೃತಿಗಳು ಇವು.  ಭಾರತದ ಹಾಗೂ ಪಶ್ಚಿಮ ಏಷ್ಯದ ಶಿಲಾತಾಮ್ರಯುಗ ಸಂಸ್ಕøತಿಗಳಲ್ಲೇ ಇವು ಅಪೂರ್ವ ಕಲಾವಸ್ತುಗಳು.
(ಎ.ಎಸ್‍ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ